Tuesday 25 April 2023

Monday 10 August 2020



 

ಹಕ್ಕಿ ಕಥೆ 6



ಹಕ್ಕಿಯ ಹೆಸರು: ಬಜಕ್ರೆ ಪಕ್ಕಿ , ಹರಟೆ ಮಲ್ಲ

English name: Jungle Babler

Scientific name: Turdoides striata 

ಈ ಹಕ್ಕಿಯನ್ನು ನೀವೂ ನಿಮ್ಮ ಮನೆಯ ಅಂಗಳದಲ್ಲಿ ನೋಡಿರಬಹುದು. ಹಾರುತ್ತಾ ಕುಪ್ಪಳಿಸುತ್ತಾ ಗುಂಪು ಗುಂಪಾಗಿ ಓಡಾಡುವ ಈ ಹಕ್ಕಿ ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಕಾಣಸಿಗುತ್ತದೆ. ಸದಾ ಕ್ಯಾ ಕ್ಯಾ ಕ್ಯಾ ಅಂತ ಶಬ್ದ ಮಾಡುತ್ತಲೇ ಇರುವುದರಿಂದ ಅತಿಯಾಗಿ ಮಾತನಾಡುತ್ತದೆ, ಬರೇ ಹರಟೆ ಹೊಡೆಯುತ್ತದೆ ಎಂಬ ಅರ್ಥದಲ್ಲೇ ಈ ಹಕ್ಕಿಯ ಹೆಸರು ಹರಟೆ ಮಲ್ಲ ಅಂತ ಆಗಿರಬೇಕು. ನಮ್ಮ ಕರಾವಳಿ ಭಾಗದಲ್ಲಿ ಚಳಿಗಾಲ ಮತ್ತು ಬೇಸಗೆಯಲ್ಲಿ ಗುಡ್ಡದಿಂದ ಸೊಪ್ಪು ಮತ್ತು ತರಗೆಲೆ ( ಬಜಕ್ರೆ ) ತರಲು ಹೋಗುತ್ತಿದ್ದ ಜನ ಅಲ್ಲೆಲ್ಲಾ ಕುಪ್ಪಳಿಸುತ್ತಾ ಶಬ್ದಮಾಡುತ್ತಾ ಓಡಾಡುವ ಈ ಹಕ್ಕಿಯನ್ನು ನೋಡಿ ಇದಕ್ಕೆ ಬಜಕ್ರೆ ಪಕ್ಕಿ ಎಂದು ಹೆಸರು ಇಟ್ಟಿರಬೇಕು. ಯಾವಾಗ್ಲೂ ಮಾತಾಡ್ತಾ ಇರುವವರನ್ನು ಬಜಕ್ರೆ ಪಕ್ಕಿದಲೆಕ ಪಾತೆರೋಂದೆ ಉಪ್ಪುವೆ ಎಂದು ಹಿರಿಯರು ಬೈಯುವುದುಂಟು. ಸದಾ ಅರಚುತ್ತಾ ಗುಂಪು ಗುಂಪಾಗಿ ಓಡಾಡುವುದರಿಂದ ಈ ಹಕ್ಕಿಗಳಿಗೆ ಇಂಗ್ಲೀಷ್ ನಲ್ಲಿ SEVEN SISTERS ಎಂಬ ಹೆಸರೂ ಇದೆ.




  ನಿಮ್ಮ ಮನೆಯ ಹತ್ತಿರ ಓಡಾಡುವ ಈ ಹಕ್ಕಿಗಳ ಗುಂಪಿನಲ್ಲಿ ಎಷ್ಟು ಹಕ್ಕಿಗಳು ಇವೆ ಎಂದು ಗಮನಿಸಿ. ಇಡೀ ಹಕ್ಕಿಯನ್ನು ಗಮನಿಸಿ. ಇದರ ಕಣ್ಣಿನ ಮಧ್ಯಬಾಗದ ಕಪ್ಪು ಚುಕ್ಕೆ ಮತ್ತು ಅದರ ಸುತ್ತಲೂ ಇರುವ ತಿಳಿ ಹಳದಿ ವೃತ್ತ ಮತ್ತು ಕೊಕ್ಕಿನ ಹಳದಿ ಬಣ್ಣ ಇದರ ಪ್ರಮುಖ ಆಕರ್ಷಣೆ. ಸುಮಾರು ಮಾರ್ಚ್ ನಿಂದ ಜುಲೈ ತಿಂಗಳ ನಡುವೆ ಮರ ಅಥವಾ ಗೊಡ್ಡ ಪೊದೆಗಳ ಮಧ್ಯೆ ಗೂಡು ಕಟ್ಟಿ ಸುಮಾರು ಮೂರರಿಂದ ಏಳು ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ. ಅದೇನೇ ಇರಲಿ ಮನೆ ಅಂಗಳದಲ್ಲಿ, ಗುಡ್ಡದಲ್ಲಿ ಪೊದೆಗಳ ನಡುವೆ ಎಲ್ಲಂದರಲ್ಲಿ ಓಡಾಡುತ್ತಾ ಸಣ್ಣಪುಟ್ಟ ಕೀಟ, ಕಂಬಳಿಹುಳ, ಹೇನು, ಕಾಳುಗಳನ್ನು  ಹೆಕ್ಕುತ್ತಾ ತನ್ನ ಹೊಟ್ಟೆಯನ್ನೂ ತುಂಬಿಸುತ್ತಾ  ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಮನೆ ಹತ್ರ ಬರುವ ಹಕ್ಕಿಗಳನ್ನು ಗಮನಿಸ್ಲಿಕ್ಕೆ ಮರೀಬೇಡಿ. ಮತ್ತೆ ಸಿಗೋಣ

ಹಕ್ಕಿ ಚಿತ್ರ ಮತ್ತು ಬರಹ

ಅರವಿಂದ ಕುಡ್ಲ, 

Sunday 19 April 2020

ಹಕ್ಕಿ ಕಥೆ 5



   ಸ್ನೇಹಿತರೇ ನಮಸ್ಕಾರ
     ನಿನ್ನೆ ರಾತ್ರಿ ಶೆಕೆ ಹೆಚ್ಚಾಗಿ ಸರಿಯಾಗಿ ನಿದ್ದೇನೇ ಬಂದಿರ್ಲಿಲ್ಲ. ಜೊತೆಗೆ ಈ ಹಕ್ಕಿ ಅರಚಾಟ ಬೇರೆ. ನೀವೇ ಕೇಳಿ ಅದ್ ಹ್ಯಾಗೆ ಬೊಬ್ಬೆ ಹಾಕ್ತಾ ಇದೆ... did he do it.... pity to do it....(2)...
ಬೆಳಗ್ಗೆ ಹೋಗಿ ನೋಡಿದ್ರೆ ಈ ಎರಡೂ ಹಕ್ಕಿಗಳು ಮನೆ ಪಕ್ಕದ ಬಯಲಿನಲ್ಲಿ ಓಡಾಡ್ತಾ ಇದ್ವು.. 


   ಸಾಮಾನ್ಯ ಕೆರೆ, ನದಿಗಳ ಹತ್ರ ಬಯಲು ಪ್ರದೇಶಗಳಲ್ಲಿ ಕಾಣ್ಲಿಕ್ಕೆ ಸಿಗೋ ಈ ಹಕ್ಕೀನ ಬಹಳಷ್ಟುಜನ ನೋಡಿರ್ತೀರಿ. ಮಾರ್ಚ್ ನಿಂದ ಆಗಸ್ಟ್ ತಿಂಗಳ ಮಧ್ಯೆ ಇದರ ಸಂತಾನಾಭಿವೃದ್ಧಿ ಕಾಲ. ಈ ಸಮಯದಲ್ಲಿ ಇವುಗಳು ಕೂಗೋದು ಜಾಸ್ತಿ.. ಇವು ಗೂಡು ಅಂತೇನೂ ಮಾಡೋದಿಲ್ಲ. ನೆಲದ ಮೇಲೆ ದುಂಡಗಿನ ಕಲ್ಲುಗಳ ಜೊತೆ ಮಬ್ಬು ಬಣ್ಣದ ತಕ್ಷಣ ಗುರುತಿಸಲು ಸಾಧ್ಯವಾಗದ
3-4 ಮೊಟ್ಟೆಗಳನ್ನುಇಡ್ತದೆ. ಮೊಟ್ಟೆಗಳ ಗಾತ್ರ ಸುಮಾರು 4cm ಅಂದ್ರೆ ಕೋಳಿಮೊಟ್ಟೆಯ ಅರ್ದ ಗಾತ್ರದ್ದು. ನೆಲದ ಮೇಲೆ ಮೊಟ್ಟೆಗಳು ಯಾವುದು ಕಲ್ಲು ಯಾವುದು ಅಂತ ಗುರುತುಹಿಡಿಯೋದು ಭಾರೀ ಕಷ್ಟದ ಕೆಲಸ. ಸಿಟಿಗಳಲ್ಲಿ ಕಟ್ಟಡದ ಮೇಲೆ ಟೆರೇಸ್ ಗಳಲ್ಲಿ ಮಾತ್ರ ಅಲ್ಲ ರೈಲ್ವೇ ಹಳಿಗಳ ಮದ್ಯೆ ಮೊಟ್ಟೆ ಇಟ್ಟು ಮರಿಮಾಡಿದ ಉದಾಹರಣೆಗಳೂ ಇದೆ. ಮೊಟ್ಟೆ ಇಟ್ಟಮೇಲೂ ಏನಾದ್ರೂ ಅಪಾಯ ಅನ್ಸಿದ್ರೆ ನಿಧಾನವಾಗಿ ಮೊಟ್ಟೆಗಳನ್ನು ಉರುಳಿಸಿಕೊಂಡು ಹೋಗಿ ಗೂಡಿನ ಜಾಗ ಬದಲಾಯಿಸಿದ್ದೂ ಇದೆ ಅಂತ ಹೇಳ್ತಾರೆ. 




   ಗಂಡು ಹೆಣ್ಣು ಎರಡೂ ಹಕ್ಕಿಗಳು ಸರದಿ ಪ್ರಕಾರ ಮೊಟ್ಟೆಗಳಿಗೆ ಕಾವು ಕೊಡ್ತವೆ. ತಮ್ಮ ಗೂಡಿನ ಹತ್ರ ಯಾವುದಾದರೂ ಪ್ರಾಣಿ ಸುಳಿದರೂ ಸಾಕು ಜೋರಾಗಿ ಬೊಬ್ಬೆ ಹಾಕುತ್ತಾ ಅವುಗಳ ದಿಕ್ಕು ತಪ್ಪಿಸುತ್ತದೆ. ಏಲ್ಲಾದರೂ ಹಾವು,ಉಡ, ಮುಂಗುಸಿ ಹೇಗೋ ಗೂಡಿನ ಹತ್ರ ಬಂದ್ರೆ ಅರಚಾಡಿ ರೆಕ್ಕೆ ಎತ್ತಿ ಹೆದರಿಸಿ ಓಡಿಸಿಬಿಡ್ತವೆ. ಅಗತ್ಯ ಬಿದ್ರೆ ವೈರಿಗಳ ಮೇಲೆ ಆಕಾಶದಿಂದ ಮಿಸೈಲ್ ಥರ ಧಾಳಿ ಮಾಡಿ ಶತ್ರುಗಳನ್ನ ಓಡಿಸ್ತವೆ.
       ಸುಮಾರು 28- 30 ದಿನಗಳಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಗಡೆ ಬರ್ತವೆ. ಹೊರಗಡೆ ಬಂದ ಕ್ಞಣದಿಂದಲೇ ನಡೆದಾಡುವ ಸಾಮರ್ಥ್ಯ ಈ ಮರಿಗಳಿಗೆ ಇರ್ತದೆ, ಅವಾಗಿಂದಲೇ ತಮ್ಮ ತಂದೆ ತಾಯಿಗಳನ್ನು ಇವು ಹಿಂಬಾಲಿಸುತ್ತವೆ. ಏನಾದರೂ ಆಪತ್ತಿನ ಸೂಚನೆ ಸಿಕ್ಕಿದ ತಕ್ಷಣ ನೆಲದಲ್ಲಿ ಅಥವಾ ಹುಲ್ಲುಗಳ ಎಡೆಯಲ್ಲಿ ಅಡಗಿಕೊಳ್ಳುತ್ತವೆ.
ನೆಲದ ಮೇಲೆ ಸಿಗುವ ಕೀಟಗಳೇ ಇವುಗಳ ಮುಖ್ಯ ಆಹಾರ. ಜೊತೆಗೆ ಶಂಕುಹುಳದಂತಹ ಜೀವಿಗಳನ್ನೂ, ಕೆಲವೊಮ್ಮೆ ಕಾಳುಗಳನ್ನೂ ತಿನ್ನುತ್ತದೆ. ಬಿರುಬೇಸಗೆಯ ದಿನಗಳಲ್ಲಿ ತನ್ನ ಹೊಟ್ಟೆಯನ್ನು ನೀರಿನಲ್ಲಿ ಒದ್ದೆಮಾಡಿಕೊಂಡು ಬಂದು ಮರಿಗಳಿಗೆ ನೀರು ಉಣಿಸುತ್ತಂತೆ.


 ಇದರ ಉದ್ದವಾದ ಕಾಲುಗಳು ಮತ್ತು ಬೆರಳುಗಳು ಮಣ್ಣು, ಕೆಸರು, ಮರಳು ಎಲ್ಲದರ ಮೇಲೂ ನಡೆಯೋದಕ್ಕೆ ಅನುಕೂಲಕರ. ಆದರೆ ಹಾರಲು ಸಾದ್ಯ ಆದ್ರೂ ಇವುಗಳು ಮರದಮೇಲೆ ಕೂತ್ಕೊಳ್ಲೋಕ್ಕೆ ಸಾದ್ಯ ಆಗಲ್ಲ. ಬಲಿಷ್ಟವಾದ ರೆಕ್ಕೆ ಇರೋದ್ರಿಂದ ತಕ್ಷಣ ಹಾರುವ ಮತ್ತು ಅಗತ್ಯ ಬಿದ್ರೆ ಡೈವ್ ಮಾಡುವ ಸಾಮರ್ಥ್ಯ ಇವಕ್ಕಿದೆ. ಸುಸ್ತಾದಾಗ ನೆಲದಮೇಲೆ ಕೂತುಕೊಳ್ಳುತವೆ ಅಥವಾ ಒಂಟಿಕಾಲಿನಲ್ಲಿ ನಿಂತು ಆಯಾಸ ಪರಿಹಾರ ಮಾಡಿಕೊಳ್ತವೆ.
  ಇವು ರಾತ್ರಿಯೆಲ್ಲ ಕೂಗ್ತಾ ಇರ್ತವಲ್ಲಾ ಹಾಗಾದ್ರೆ ಇವು ನಿದ್ರೆ ಮಾಡೋದಿಲ್ವಾ ಅಂತ ಕೆಲವರು ಕೇಳ್ತಾರೆ. ಸಂತಾನಾಭಿವೃದ್ಧಿ ಕಾಲದಲ್ಲಿ ಅಗತ್ಯ ಬಿದ್ರೆ ಇವು ರಾತ್ರೆಯೂ ಎಚ್ಚರವಾಗಿ ಇರ್ತವೆ.
  ಈ ಹಕ್ಕಿ ನದಿಗಿಂತಾ ತುಂಬ ಎತ್ತರ ಪ್ರದೇಶದಲ್ಲಿ ಗೂಡು ಮಾಡಿದ್ರೆ ಭಾರೀ ಮಳೆಗಾಲ ಬರುತ್ತೆ, ಒಣಗಿದ ನದಿಯ ಮದ್ಯದಲ್ಲಿ ಗೂಡು ಮಾಡಿದ್ರೆ ಮಳೆಗಾಲ ಬರೋದು ತಡ ಆಗುತ್ತೆ , ನದಿಬದಿಯಲ್ಲೇ ಮೊಟ್ಟೆ ಇಟ್ರೆ ಮಳೆಗಾಲ ಸರಿಯಾದ ಸಮಯಕ್ಕೆ ಬರುತ್ತೆ ಅಂತ ಕೆಲವುಕಡೆ ಜನ ನಂಬ್ತಾರಂತೆ. ಪ್ರಾಣಿ ಪಕ್ಷಿಗಳು ನಮಗಿಂತ ಬೇಗ ಪರಿಸರದ ಬದಲವಣೆಗಳನ್ನ sence ಮಾಡ್ತವೆ, ಅವುಗಳನ್ನು ನೋಡಿ ಪ್ರಕೃತಿಗೆ ಹತ್ತಿರವಾಗಿ ಬದುಕೋದನ್ನು ನಾವು ಕಲೀಬೇಕು ಅಲ್ವಾ..
  ಏನು ಇಷ್ಟೆಲ್ಲಾ ಕತೆ ಹೇಳಿ ಈ ಹಕ್ಕಿ ಹೆಸರೇ ಹೇಳ್ಲಿಲ್ಲ ಅಂತಿದೀರಾ.. ಅಷ್ಟಾಂಗ ಯೋಗದಲ್ಲಿ ಒಂದು ಆಸನ ಇದೆ. ಎರಡೂ ಕಾಲಿಗಳನ್ನು ಭುಜದ ಹಿಂಬಾಗದಿಂದ ಮೇಲ್ಮುಖವಾಗಿ ಎತ್ತಿ ಕೈಗಳ ಆಧಾರದಲ್ಲಿ ನಿಲ್ಲುವ ಭಂಗಿ, ಅದೇ ಟಿಟ್ಟಿಭಾಸನ... ಹಕ್ಕಿಯಿಂದಾಗಿ ಆಸನಕ್ಕೆ ಈ ಹೆಸರು ಬಂತು ಅಂತ ಹೇಳ್ತಾರೆ..  Yes you are right.. ಈ ಹಕ್ಕಿಯ ಕನ್ನಡ ಹೆಸರು ಟಿಟ್ಟಿಭ.. ಮಲೆನಾಡಿನ ಕಡೆ  ತೇನೆಹಕ್ಕಿ ಅಂತ ಕರೀತಾರೆ, ಕರಾವಳಿಯಲ್ಲಿ ಟ್ಯಾಂಟ್ರಕ್ಕಿ ಅಂತ್ರ್, ಇನ್ನು ಕೆಲವರು ಟವಕ್ಕಿ ಅಂತನೂ, ತುಳುವಿನಲ್ಲಿ ಟಿರಿಂ ಟಿರಿ ಪಕ್ಕಿ ಅಂತಾನೂ ಕರೀತಾರೆ...
ಇದರ English ಹೆಸರು Red Wattled Lapwing.. ನಿಮ್ಮೂರಲ್ಲಿ ಈ ಹಕ್ಕಿಯನ್ನ ಏನೂಂತ ಕರೀತಾರೆ ನಮಗೂ ತಿಳಿಸ್ತೀರಲ್ಲಾ .....



ರಜಾ ದಿನಗಳ ಮಜಾ ಹೆಚ್ಚು ಮಾಡ್ಲಿಕ್ಕೆ ಅಂತ ನಾನು ಈ ಹಕ್ಕಿ ಚಿತ್ರಬರಿಯೋ ಪ್ರಯತ್ನ ಮಾಡಿದ್ದೇನೆ, ನೀವೂ ನಿಮ್ಮ ಇಷ್ಟದ ಹಕ್ಕಿಯ ಚಿತ್ರ ಬರೀರಿ...  ಮತ್ತೆ ಸಿಗೋಣ





Friday 17 April 2020

ಹಕ್ಕಿ ಕಥೆ 4



ಕಾಡು ಕಾಗೆ 
Indian Junge Crow

Corvus culminatus

ಒಂದು ಕಾಗೆ ಬಂದಿತು
ತಿಂಡಿಯನ್ನು ಕಂಡಿತು
ಕೂಗಿ ತನ್ನ ಬಳಗವನ್ನು
ಕಾ.. ಕಾ.. ಎಂದಿತು          ಈ ಹಾಡನ್ನು ಬಹಳಷ್ಷು ಜನ ಕೇಳಿರ್ತೀರಿ...

     ಕಾಗೆ ನಮಗೆಲ್ಲಾ ಅತ್ಯಂತ ಚಿರಪರಿಚಿತ ಹಕ್ಕಿ.. ಪಂಚತಂತ್ರದ ಕಥೆಗಳಲ್ಲಿ, ಮಕ್ಕಳ ಹಾಡುಗಳಲ್ಲಿ ಬಹಳಷ್ಡುಕಡೆ ಸುಲಭವಾಗಿ ಸಿಕ್ಕಿಬಿಡುವ ಅತ್ಯಂತ ಆಪ್ತವಾದ ಹಕ್ಕಿ. ಅದಕ್ಕೇ ಇರಬೇಕು ನಾವು ನಮ್ಮ ಹಿರಿಯರಿಗೆ ಮಾಡುವ ಅಪರಕ್ರಿಯೆಗಳಲ್ಲಿ ಹಿಡಿ ಅನ್ನವನ್ನು ಕಾಗೆಗಳಿಗೆ ಇಡುವ ಕ್ರಮ ಇದೆ.




     ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿ ಒಬ್ರು ಸ್ವಾರಸ್ಯಕರ ಘಟನೆ ಒಂದನ್ನ ಹೇಳಿದ್ದು ನೆನಪಾಗ್ತದೆ. ಕಾಗೆ ಗೂಡುಕಟ್ಟಲು ಮರಗಳನ್ನ ಆಶ್ರಯಿಸುತ್ತದೆ. ಮರದಮೇಲೆ ಹಲವಾರು ಗಟ್ಟಿ ಒಣಕಡ್ಡಿಗಳನ್ನು ತಂದು ಜೋಡಿಸಿ ಬುಟ್ಟಿಯಾಕಾರದ ಗೂಡನ್ನು ಕಟ್ಟಿ, ಕೋಳಿಮೊಟ್ಟೆಗಿಂತ ತುಸು ಚಿಕ್ಕಗಾತ್ರದ ಬಿಳಿಬಣ್ಣದ ಮೊಟ್ಟೆಗಳನ್ನ ಇಟ್ಟು ಮರಿಮಾಡ್ತದೆ. ತಂದೆ ತಾಯಿ ಎರಡೂ ಬಹಳ ಜತನದಿಂದ ಮರಿಗಳನ್ನು ಕಾಪಾಡ್ತವೆ. ಗೂಡಿನಹತ್ರ ಯಾರನ್ನೂ ಬರೋಕೆ ಬಿಡೋದೇ ಇಲ್ಲ. ಬೇಟೆಗಾರ ಹದ್ದುಗಳು ಬಂದರೂ ಹೆದರದೆ ಹಿಮ್ಮೆಟ್ಟಿಸುತ್ತವೆ, ಒಮ್ಮೊಮ್ಮೆ ಅಟ್ಟಿಸಿಕೊಂಡೂ ಹೋಗುತ್ತವೆ.


     ಹೀಗೆ ಮರಿಗಳು ಬೆಳೆದು ರೆಕ್ಕೆ ಬಲಿತು ಹಾರಿ ಹೋದ ಮೇಲೆ ಗೂಡು ಖಾಲಿ ಆಯ್ತು. ಹಕ್ಕಿಗಳಿಗೆ ಗೂಡು ಮರಿಗಳನ್ನು ಬೆಳೆಸುವ NURSING HOME ಮಾತ್ರ, ಮರಿಗಳು ಬೆಳೆದ ಮೇಲೆ ಅವುಗಳಿಗೆ ಗೂಡಿನ ಅಗತ್ಯ ಇಲ್ಲ, ಅವು ಗೂಡನ್ನು ನಮ್ಮತರಹ ಪಕ್ಕಾ ಮನೆಯಾಗಿ, ಖಾಯಂ ವಿಳಾಸವಾಗಿ ಬಳಸೋದಿಲ್ಲ. ಹೀಗಿರುವ ಆ ಗೂಡು ನಮ್ಮ Scientist ಸಾಹೇಬರ ಗಮನ ಸೆಳೀತಂತೆ. ಆ ಗೂಡನ್ನು Binocular ನಿಂದ ನೋಡುತ್ತಿದ್ದ ಅವರಿಗೆ ಆಶ್ಚರ್ಯ ಕಾದಿತ್ತು. ಆಶ್ಚರ್ಯವನ್ನ confirm ಮಾಡ್ಕೊಳ್ಲಿಕ್ಕೆ ಮರಹತ್ತಿ ಗೂಡನ್ನ ಪರೀಕ್ಷೆ ಮಾಡಿದ್ರು. ನಗರದ ಉದ್ಯಾನದ ಮರದಲ್ಲಿದ್ದ ಗೂಡಿನ್ನು ಕಟ್ಲಿಕ್ಕೆ ಆ ಕಾಗೆ ಕಬ್ಬಿಣದ ಸರಳು, ತಂತಿ, ಪ್ಲಾಸ್ಟಿಕ್ ದಾರ ಎಲ್ಲವನ್ನೂ ಬಳಸಿತ್ತಂತೆ. ಇದು ಕಾಗೆಯ ಬುದ್ದಿವಂತಿಕೆ ಮತ್ತು ಪರಿಸರದ ಬದಲಾವಣೆಗೆ ಒಗ್ಗಿಕೊಳ್ಳುವ ಅದರ ಗುಣಕ್ಕೆ ಒಳ್ಳೆ ನಿದರ್ಶನ. 



       ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ಕಾಗೆಯ ಪಾತ್ರ ಬಹಳ ಮಹತ್ವದ್ದು. ಇದಕ್ಕೆ ಸಂಬಂಧಪಟ್ಟಹಾಗೆ ಒಂದು ಘಟನೆ ನೆನಪಾಗುತ್ತೆ. ನಾನೊಂದ್ಸರಿ ಟ್ರೈನ್ ಜರ್ನಿ ಮಾಡ್ತಾ ಇದ್ದೆ. ಸ್ಟೇಷನ್ ನಲ್ಲಿ ಟ್ರೈನ್ ನಿಂತ್ಕೊಂಡಿತು. ಬೆಳಗ್ಗಿನ ತಿಂಡಿ ತಿನ್ನೋ ಸಮಯ, ತಿಂಡಿ ಪಾರ್ಸೆಲ್ ತಗೊಂಡು ತಿನ್ಲಿಕ್ಕೆ ಶುರು ಮಾಡಿದ್ವಿ. ಹೊಟ್ಟೆತುಂಬಾ ತಿಂಡಿ ತಿಂದು, ತಿಂಡಿ ಪೊಟ್ಣಣ ಕಿಟಕಿಯಿಂದ ಆಚೆ ಎಸೆದು ಬಿಟ್ವಿ. ಇನ್ನೊಂದು ಟ್ರೈನ್ ಕ್ರಾಸಿಂಗ್ ಕೊಡೋಕ್ಕೆ ನಮ್ಮ ಟ್ರೈನ್ ಕಾಯ್ತಾ ಇತ್ತು. ಪಕ್ಕದ ಟ್ರಾಕ್ ಮೇಲೆ ತಿಂಡಿ ಪ್ಯಾಕೆಟ್ ಗಳು ಬಿದ್ದಿದ್ದವು. ಕಾಗೆಗಳು ಒಂದೊಂದಾಗಿ ಬಂದು ಪ್ಯಾಕೆಟ್ ಗಳನ್ನು ಎತ್ತಿಕೊಂಡು ಹೋದವು. ಹತ್ತೇ ನಿಮಿಷದಲ್ಲಿ ಪಕ್ಕದ ಟ್ರಾಕ್ ಕ್ಲೀನ್ ಆಗಿತ್ತು.


     ಅದೇರೀತಿ ರಸ್ತೆಮೇಲೆ ವಾಹನದ ಚಕ್ರಕ್ಕೆ ಸಿಕ್ಕಿ ಹಲವಾರು ಪ್ರಾಣಿಗಳು ಸಾಯೋದು ಮಾಮೂಲಿ. ನಮ್ಮ ಕಾಗೆರಾಯ ಅಲ್ಲೂ ಹಾಜರ್. Postmartam ಮಾಡಿ ಪರಿಸರ ಸ್ವಚ್ಛ ಮಾಡೋದ್ರಲ್ಲಿ ಎತ್ತಿದ ಕೈ. 

ಊರ ಕಾಗೆ 

House Crow

Corvus splendens




Thursday 16 April 2020

ಹಕ್ಕಿ ಪುಕ್ಕ 3



ಕನ್ನಡ ಹೆಸರು :   ಚೋರೆ ಹಕ್ಕಿ,     ಚುಕ್ಕೆ ಕಪೋತ

English name :   Spotted Dove

Scientific name : Stigmatopelia chinensis


     DOVE ಅಂದ ತಕ್ಷಣ ಹೆಚ್ಚಿನ ಜನ ನೆನಪಿಸಿಕೊಳ್ಳೋದು ಟಿವಿಯಲ್ಲಿ ಬರುವ ಸಾಬೂನಿನ ಜಾಹೀರಾತು . ಸಾಮಾನ್ಯವಾಗಿ ಮನೆಗಳಲ್ಲಿ ಸಾಕಲಾಗುವ ಬಳೀಬಣ್ಣದ ಪಾರಿವಾಳವನ್ನೇ ಹೆಚ್ಚಿನ ಜನ  DOVE  ಅಂತ ಕರೀತಾರೆ.

     ಆದರೆ DOVE ಅನ್ನುವ ಪ್ರಬೇಧದ ಹಕ್ಕಿಗಳು ಪಾರಿವಾಳಕ್ಕಿಂತ ಚಿಕ್ಕವು. ದೇಹದ ಗಾತ್ರಕ್ಕೆ ಹೋಲಿಸಿದರೆ ಬಾಲ ಸ್ವಲ್ಪ ಉದ್ದ. ಗಣಪತಿಯ ಹಾಗೆ ಕಾಣುವ ದೊಡ್ಡ ಹೊಟ್ಟೆ, ಅದನ್ನು ಹೊರಲಿಕ್ಕೆ ತುಸು ಗಿಡ್ಡವೇ ಅನ್ನಬಹುದಾದ ಕಾಲುಗಳು, ಪುಟಾಣಿ ತಲೆ. ಹೊಟ್ಟೆಯನ್ನು ಎಳೆದುಕೊಂಡು ನಡೆಯುವ ವಿಶಿಷ್ಟ ನಡಿಗೆ. ನೆಲದಲ್ಲಿ ನಡೆದಾಡುತ್ತಾ ಕಾಳು ಹೆಕ್ಕಲು ಕಳ್ಳನಂತೆ ಬರುವ ರೀತಿ, ಹತ್ತಿರ ಹೋದರೆ ಸಾಕು ಹಿಡಿದೇಬಿಡುವರು ಎಂಬಂತೆ ದಡಬಡಾಯಿಸಿ ರೆಕ್ಕೆ ಬಡಿದು ಹಾರಿಬಿಡುವ ರೀತಿ ನೋಡಿಯೇ ಮಲೆನಾಡಿಗರು ಇದಕ್ಕೆ ಚೋರ ಹಕ್ಕಿ ಅಂತ ಹೆಸರು ಇಟ್ಟಿರಬೇಕು. ನಮ್ಮ ತುಳುನಾಡಿನಲ್ಲಿ ಈ ಹಕ್ಕಿಗೆ ‘ಪುದ’ ಅಂತ ಕರೀತಾರೆ.



      ಶಾಲಾಮಕ್ಕಳ ಬಿಸಿಊಟಕ್ಕೂ ಈ ಹಕ್ಕಿಗೂ ಅವಿನಾಭಾವ ಸಂಬಂಧ. ಮಧ್ಯಾಹ್ನದ ಊಟಮುಗಿಸಿ ಮಕ್ಕಳು ಕೈತೋಳೆಯುವಲ್ಲಿ ಬಿದ್ದಿರಬಹುದಾದ ಅನ್ನದ ಅಗುಳನ್ನು ಹೆಕ್ಕಿತಿನ್ನಲು ಪ್ರತಿದಿನ ಬಂದೇಬರುತ್ತದೆ, ಆದರೆ ಮಕ್ಕಳೆಲ್ಲ ತರಗತಿಗೆ ಹೋದ ನಂತರ ಮಾತ್ರ. ಅಪಾಯವಿಲ್ಲ ಎಂದಾದರೆ ಮನೆಯ ಅಂಗಳದಲ್ಲಿ ಓಡಾಡಿಕೊಂಡಿರುತ್ತದೆ.. ಹೂ ಹೂ ಹೂ ಹುರ್ರ್ ಹುರ್ರ್ ಹುರ್ರ್ ಅಂತ ಕೂಗುವ ಈ ಕಪೋತ ನಿಮ್ಮ ಮನೆ ಅಂಗಳದಲ್ಲೂ ಇರಬಹುದು.....